ವಿಶೇಷ ಲೇಖನ :
ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ
ಕಾರ್ಯದರ್ಶಿ, ಚಿತ್ರದುರ್ಗ ಜಿಲ್ಲಾ ರೆಡ್ಡಿಜನಸಂಘ
ಸದಸ್ಯರು, ಬೆಂಗಳೂರು ಸೌತ್ ಸೆಂಟರ್ (ಒ.)
ಮೊ : 94483 38821
ಸುದ್ದಿಒನ್ : ಜಗತ್ತಿನ ಅತಿ ಆಳವಾದ ಕೊಳವೆಬಾವಿ “ಕೋಲಾ ಸೂಪರ್ ಡೀಪ್ ಬೋರ್‌ಹೋಲ್, ಇದು ರಷ್ಯಾದಲ್ಲಿದೆ. ಗರಿಷ್ಠ ಆಳ ಸುಮಾರು 12.2 ಕಿಲೋ ಮೀಟರ್ ಅಥವಾ 40,230 ಅಡಿ. ಇದು ಮೌಂಟ್ ಎವರೆಸ್ಟ್ ಶಿಖರದ ಎತ್ತರಕ್ಕಿಂತ ಹೆಚ್ಚು ಮತ್ತು ಪೆಸಿಫಿಕ್ ಸಾಗರದ ಮಾರಿಯಾವಿ ಟ್ರೆಂಚ್ ಆಳಕ್ಕಿಂತಲೂ ಆಳವಾಗಿದೆ. ಈ ಕೊಳವೆಬಾವಿಯನ್ನು ನೀರಿಗಾಗಿ ಕೊರೆದಿದ್ದಲ್ಲ, ಬದಲಾಗಿ ಭೂಮಿಯ ಆಂತರಿಕ ರಚನೆಯನ್ನು ಸಂಶೋಧಿಸಲು ಇದನ್ನು ಕೊರೆಯಲಾಯಿತು.
1970ರಲ್ಲಿ ಸೋವಿಯತ್ ಯೂನಿಯನ್ (USSR) ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಪ್ರಾರಂಭಿಸಿತು. ಸುಮಾರು 20 ವರ್ಷಗಳ ಕಾಲ (1970 ರಿಂದ 1992) ಡ್ರಿಲ್ಲಿಂಗ್ ನಡೆಯಿತು. 15 ಕಿ.ಮೀ. ಆಳದವರೆಗೆ ಕೊರೆಯುವ ಗುರಿ ಹೊಂದಲಾಯಿತು. ಆದರೆ 12.2 ಕಿ.ಮೀ. ತಲುಪಿದ ನಂತರ ಹೆಚ್ಚಿನ ಪ್ರಗತಿ ಸಾಧ್ಯವಾಗಲಿಲ್ಲ. ಭೂಮಿಯ ಆಳದಲ್ಲಿ ತಾಪಮಾನ ಸುಮಾರು 180 ಡಿಗ್ರಿ ಸೆಂಟಿ ಗ್ರೇಡ್ ತಲುಪಿತು. ಇದು ವಿಜ್ಞಾನಿಗಳು ನಿರೀಕ್ಷಿಸಿದ್ದಕ್ಕಿಂತ 100 ಡಿಗ್ರಿ ಸೆಂಟಿಗ್ರೇಡ್ ದುಪ್ಪಟ್ಟು. ಈ ವಿಪರೀತ ಬಿಸಿಗೆ, ಕೊರೆಯುವ ಯಂತ್ರಗಳು ಮತ್ತು ಕೊಳವೆಗಳು ಕರಗಿ (Drill Brits) ಆಕಾರ ಕಳೆದುಕೊಂಡವು, ಅಷ್ಟು ಆಳದಲ್ಲಿ ಗಟ್ಟಿ ಬಂಡೆಗಳು ಗಟ್ಟಿಯಾಗಿರದೆ ಹೆಚ್ಚಿನ ಒತ್ತಡದಿಂದಾಗಿ ಪ್ಲಾಸ್ಟಿಕ್‌ನಂತೆ ವರ್ತಿಸಲು ಪ್ರಾರಂಭಿಸಿದವು. ಇದರಿಂದ ಇನ್ನು ಹೆಚ್ಚಿನ ಆಳಕ್ಕೆ ಕೊರೆಯಲು ಸಾಧ್ಯವಾಗಿಲ್ಲ.
ವಿಜ್ಞಾನಿಗಳು 6 ಕಿ.ಮೀ. ಆಳದಲ್ಲಿ 2 ಬಿಲಿಯನ್ ವರ್ಷಗಳಷ್ಟು ಹಳೆಯದಾದ ಏಕಕೋಶೀಯ ಜೀವಿಗಳ ಪಳವಳಿಕೆಗಳನ್ನು ಪತ್ತೆ ಹಚ್ಚಿದರು. 3 ರಿಂದ 6 ಕಿ.ಮೀ. ಆಳದಲ್ಲಿ ಅಗ್ನಿಶಿಲೆಗಳ ಬಂಡೆಗಳ ನಡುವೆ ನೀರು ಪತ್ತೆಯಾಯಿತು. ಭೂಮಿಯ ಆಳದಲ್ಲಿ ಹೆಚ್ಚಿನ ಪ್ರಮಾಣದ ಹೈಡ್ರೋಜನ್ ಅನಿಲ ಪತ್ತೆಯಾಯಿತು. 1995ರಲ್ಲಿ ಆರ್ಥಿಕ ಕೊರತೆ ಮತ್ತು ತಾಂತ್ರಿಕ ಸಮಸ್ಯೆಗಳಿಂದಾಗಿ ಯೋಜನೆಯನ್ನು ಸಂಪೂರ್ಣವಾಗಿ ನಿಲ್ಲಿಸಲಾಯಿತು. ಪ್ರಸ್ತುತ ಇದನ್ನು ಲೋಹದ ಮುಚ್ಚಳದಿಂದ ಭದ್ರವಾಗಿ ಮುಚ್ಚಲಾಗಿದೆ.
ವಜ್ರದ ಕೊರೆಯುವಿಕೆ ಎಂಬುದು ಅತ್ಯಂತ ಗಟ್ಟಿಯಾದ ವಜ್ರಗಳನ್ನು ಬಳಸಿಕೊಂಡು ಭೂಮಿಯ ಆಳದಲ್ಲಿ ಕೊರೆಯುವ ಆತ್ಯಾಧುನಿಕ ತಂತ್ರಜ್ಞಾನವಾಗಿದೆ. ಇದು ಮುಖ್ಯವಾಗಿ ಗಣಿಗಾರಿಕೆ ಮತ್ತು ನಿರ್ಮಾಣ ಕ್ಷೇತ್ರಗಳಲ್ಲಿ ಅತಿ ಹೆಚ್ಚು ಬಳಕೆಯಾಗುತ್ತದೆ.
ಭೂಮಿಯ ಅಡಿಯಲ್ಲಿ ಚಿನ್ನ , ತಾಮ್ರ , ವಜ್ರ , ಕಲ್ಲಿದ್ದಲು ಮುಂತಾದ ಅಮೂಲ್ಯವಾದ ಖನಿಜಗಳ ನಿಕ್ಷೇಪಗಳನ್ನು ಪತ್ತೆ ಹಚ್ಚಲು ಬಳಸಲಾಗುತ್ತದೆ.
ಇದು ಬಂಡೆಗಳ ಆಳವಾದ ಮಾದರಿಗಳನ್ನು ಹೊರತೆಗೆಯಲು ಸಹಾಯ ಮಾಡುತ್ತದೆ. ಇದರಿಂದ ಆ ಪ್ರದೇಶದಲ್ಲಿ ಎಷ್ಟು ಖನಿಜವಿದೆ ಎಂದು ಅಂದಾಜಿಸಬಹುದು. ಭೂಮಿಯ ಆಳದ ಪದರಗಳ ರಚನೆ, ಬಂಡೆಗಳ ಗುಣಮಟ್ಟ ಮತ್ತು ವಿಧಗಳನ್ನು ಅಧ್ಯಯನ ಮಾಡಲು ಇದು ಅತ್ಯುತ್ತಮ ವಿಧಾನವಾಗಿದೆ ಎಂದು ಭೂವೈಜ್ಞಾನಿಕವಾಗಿ ಅಭಿಪ್ರಾಯ ಪಡಲಾಗಿದೆ.




source https://suddione.com/the-worlds-deepest-borehole-has-revealed-the-secrets-of-the-depths-of-the-earth/



0 Comments
If u have any queries, Please let us know