ಗಣೇಶೋತ್ಸವ ಸಮಾಜವನ್ನು ಒಗ್ಗೂಡಿಸುವ ಸಂಕೇತ: ಎನ್ ಆರ್. ಲಕ್ಷ್ಮಿಕಾಂತ್

ಹಿರಿಯೂರು : ಭಾರತೀಯ ಹಿಂದೂ ಸಂಸ್ಕೃತಿಯಲ್ಲಿ ಗಣೇಶ ಆಚರಣೆಯು ಒಂದಾಗಿದ್ದು, ಯುವ ಪೀಳಿಗೆಯನ್ನು ದೈವಭಕ್ತಿಯಿಂದ ರಾಷ್ಟ್ರಭಕ್ತಿ ಕಡೆಗೆ ಕೊಂಡೊಯ್ಯಬೇಕು ಎಂದು ಬಿಜೆಪಿ ಹಿರಿಯ ಮುಖಂಡ ಹಾಗೂ ಮಾಜಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎನ್ ಆರ್. ಲಕ್ಷ್ಮಿಕಾಂತ್ ಅಭಿಪ್ರಾಯಪಟ್ಟರು.

ನಗರದ ಶಂಕರ ಮಠ ಬಳಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ವತಿಯಿಂದ ಪ್ರತಿಷ್ಠಾಪಿಸಿರುವ ಹಿಂದೂ ಮಹಾಗಣಪತಿಗೆ ವಿಶೇಷ ಪೂಜೆ ಸಲ್ಲಿಸಿ, ದರ್ಶನ ಪಡೆದು ಬಳಿಕ ಮಾತನಾಡಿದರು.

ಸಾರ್ವಜನಿಕವಾಗಿ ಆಚರಿಸುವ ಗಣೇಶೋತ್ಸವ ಇಂದು ಸಮಾಜವನ್ನು ಒಗ್ಗೂಡಿಸುವ ಒಂದು ಸಂಕೇತವಾಗಿದೆ. ಶತಮಾನಗಳಿಂದಲೂ ಗಣೇಶೋತ್ಸವ ಆಚರಿಸುತ್ತಿದ್ದರೂ ಭಾರತೀಯ ಸ್ವಾತಂತ್ರ್ಯ ಸಂಗ್ರಾಮದೊಂದಿಗೆ ಸಾರ್ವಜನಿಕ ಗಣೇಶೋತ್ಸವ ಸಂಬಂಧ ಅನನ್ಯವಾದದ್ದು, ಗಣೇಶನ ಹಬ್ಬವನ್ನು ಸಾರ್ವಜನಿಕಗೊಳಿಸಿದ ಕೀರ್ತಿ ಬಾಲಗಂಗಾಧರನಾಥ್ ತಿಲಕ್ ಅವರಿಗೆ ಸಲ್ಲುತ್ತದೆ. ಅವರು 1893ರಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಜನರಲ್ಲಿ ಒಗ್ಗಟ್ಟು ಮೂಡಿಸಲು ಸಾರ್ವಜನಿಕ ಗಣೇಶೋತ್ಸವಕ್ಕೆ ಕರೆ ನೀಡಿದರು. ಆ ಪರಂಪರೆಯು ಇಂದಿಗೂ ಮುಂದುವರಿಯುತ್ತಿದೆ. ಗಣೇಶ ಚತುರ್ಥಿಯ ದಿನದಂದು ಭಕ್ತರು ಗಣಪತಿಯ ಮೂರ್ತಿಯನ್ನು ಮನೆಗೆ ಅಥವಾ ಪೆಂಡಲ್ ಗೆ ಕರೆತರುತ್ತಾರೆ. ಗಣೇಶ ಹಬ್ಬ ಭಕ್ತಿಗೆ, ಹರ್ಷೋಲ್ಲಾಸಕ್ಕೆ ಮತ್ತು ಸಮಾನತೆಯ ಮೌಲ್ಯಗಳಿಗೆ ಗಣೇಶ ಹಬ್ಬ ಸಾಕ್ಷಿಯಾಗಿದೆ. ವಿಘ್ನ ವಿನಾಯಕ, ಗಣಪತಿ, ಗಜಾನನ, ಲಂಬೋದರ ಹೀಗೆ ಅನೇಕ ಹೆಸರಿನಿಂದ ಪೂಜಿಸಲ್ಪಡುವ ಈ ದೇವರು ಮನೆಗಳಲ್ಲಿ ಮತ್ತು ಸಾರ್ವಜನಿಕ ಪೆಂಡಲ್ಗಳಲ್ಲಿ ಧಾರ್ಮಿಕ ಆಸ್ಥೆಯನ್ನು ತೋರುವುದರ ಜೊತೆಗೆ ಸಾಮಾಜಿಕ ಐಕ್ಯತೆಗೆ ದಾರಿ ಮಾಡಿಕೊಡುತ್ತಾನೆ. ಹೀಗಾಗಿ ಗಣಪತಿಯ ಆಗಮನ ಕೇವಲ ಒಂದು ಹಬ್ಬವಲ್ಲ ಅದು ಜನಮನಗಳಲ್ಲಿ ಹೊಸ ಚೈತನ್ಯವನ್ನು ತುಂಬುವ ಒಂದು ಸಾಮಾಜಿಕ ಸಾಂಸ್ಕೃತಿಕ ಚಳುವಳಿಯಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹಿಂದೂ ಮಹಾಗಣಪತಿ ಸಮಿತಿ ಅಧ್ಯಕ್ಷ ನಾರಾಯಣ ರೆಡ್ಡಿ, ಮಾಜಿ ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ವಿಶ್ವನಾಥ್, ಜೆಬಿ ರಾಜಣ್ಣ, ಅಮರ್, ಪ್ರಶಾಂತ್, ರಾಮು, ನಾಗೇಂದ್ರ, ಜೋಧಾ, ಸ್ಟೂಡಿಯೋ ಗೋವಿಂದಪ್ಪ, ಯೋಗೇಶ್, ಸೋಮಣ್ಣ ಹಾಗೂ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಕಾರ್ಯಕರ್ತರು ಇದ್ದರು.

{}

Post a Comment

0 Comments