
ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 07 : ನಾವು ಎಲ್ಲರೂ ನಮ್ಮ ಜೀವನದಲ್ಲಿ ಸ್ವಲ್ಪ ಸಮಯವನ್ನು ಸಮಾಜ ಸೇವೆಗೆ ಮೀಸಲಿಟ್ಟರೆ, ಸಮಾಜದ ಸಮಸ್ಯೆಗಳನ್ನು ಕಡಿಮೆ ಮಾಡಲು ಸಾಧ್ಯ. ಈ ಕಾರ್ಯವನ್ನು ವಾಸವಿ ಕ್ಲಬ್ ಮೂಲಕ ಮಾಡುತ್ತಿದೆ ಎಂದು ವಾಸವಿ ಕ್ಲಬ್ ಚಿತ್ರದುರ್ಗ ಫೋರ್ಟ್‍ನ ಅಧ್ಯಕ್ಷೆ ರಾಜೇಶ್ವರಿ ಸಿದ್ದರಾಮ್ ತಿಳಿಸಿದರು.
ನಗರದ ವಾಸವಿ ಕ್ಲಬ್ ಚಿತ್ರದುರ್ಗ ಫೋರ್ಟ್ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಸೇವಾ ಸಪ್ತಾಹದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಈ ಸಂಸ್ಥೆಯ ಚಟುವಟಿಕೆಗಳಿಗೆ ಕೈಜೋಡಿಸಿದರೆ, ಒಳ್ಳೆಯ ಸಮಾಜ ಒಳ್ಳೆಯ ದೇಶ ಎಂಬ ಕನಸು ನನಸಾಗುತ್ತದೆ ಎಂದರು.
ಸಮಾಜದ ಹಿಂದುಳಿದ ವರ್ಗ, ಬಡವರ್ಗ, ಅನಾಥರಿಗೆ ಸಹಾಯ ಮಾಡುವ ನಿಸ್ವಾರ್ಥ ಮನೋಭಾವದ ಮೂಲಕ ಕೆಲಸ ಮಾಡಲಾಗುತ್ತಿದೆ. ಜನರಲ್ಲಿ ಜವಾಬ್ದಾರಿ, ನಾಯಕತ್ವ ಹಾಗೂ ಮಾನವೀಯತೆ ಬೆಳೆಸುವ ಕಾರ್ಯ ಮಾಡಲಾಗುತ್ತಿದೆ. ಇಂದಿನ ದಿನಗಳಲ್ಲಿ ವಾಸವಿ ಕ್ಲಬ್ ದೇಶದ ನೂರಾರು ನಗರಗಳಲ್ಲಿ ತನ್ನ ಶಾಖೆಗಳನ್ನು ಹೊಂದಿದ್ದು, ಸಾವಿರಾರು ಸದಸ್ಯರ ಮೂಲಕ ಸಮಾಜಮುಖಿ ಕಾರ್ಯಗಳನ್ನು ಯಶಸ್ವಿಯಾಗಿ ನಡೆಸುತ್ತಿದೆ ಎಂದು ಹೇಳಿದರು.

ವಾಸವಿ ಕ್ಲಬ್ ಒಂದು ಸಾಮಾನ್ಯ ಸಂಘಟನೆ ಮಾತ್ರವಲ್ಲ, ಸೇವೆಯ ಸಂಕೇತ, ಮಾನವೀಯ ಮೌಲ್ಯಗಳ ದೀಪಸ್ತಂಭ. ನಾವು ಪ್ರತಿಯೊಬ್ಬರೂ ಈ ತತ್ವಗಳನ್ನು ಅಳವಡಿಸಿಕೊಂಡರೆ, ನಮ್ಮ ಜೀವನವೂ ಅರ್ಥಪೂರ್ಣವಾಗುತ್ತದೆ ಎಂದು ತಿಳಿಸಿದರು.
ಪ್ರತಿವರ್ಷವೂ ನಾವು ಪತ್ರಕರ್ತರು ಸೇರಿದಂತೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರನ್ನು ಗೌರವಿಸುವುದು ನಮ್ಮ ಕರ್ತವ್ಯವಾಗಿದ್ದು, ಅದರಂತೆ ಈ ವರ್ಷವೂ ಕೂಡಾ ಜಿಲ್ಲೆಯ ಪತ್ರಿಕಾ ರಂಗದಲ್ಲಿ ಅಪಾರ ಸೇವೆ ಸಲ್ಲಿಸಿದ ಪ್ರಜಾವಾಣಿ ಪತ್ರಿಕೆಯ ವರದಿಗಾರರಾದ ಕೆ.ಪಿ.ಓಂಕಾರಮೂರ್ತಿ ಅವರನ್ನು ಸನ್ಮಾಸುತ್ತಿರುವುದು ಸಂತಸದ ವಿಷಯವಾಗಿದೆ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪತ್ರಕರ್ತ ಕೆ.ಪಿ.ಓಂಕಾರಮೂರ್ತಿ, ಸಮಾಜದಲ್ಲಿ ಸೇವಾಭಾವನೆ, ಸಸಂತೋಷ್ದತೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ಮಹತ್ವದ ಕಾರ್ಯವನ್ನು ವಾಸವಿ ಕ್ಲಬ್ ಚಿತ್ರದುರ್ಗ ಫೋರ್ಟ್ ಮಾಡುತ್ತಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು.
ನಿರಂತರ ಕಾರ್ಯಕ್ರಮಗಳ ಮೂಲಕ ಅಹಿಂಸೆಯ ಸಂದೇಶ, ಸಮಾನತೆ, ಶಾಂತಿ ಮತ್ತು ಮಾನವೀಯತೆಗಳನ್ನು ಸಾರುವ ಕೆಲಸ ಕ್ಲಬ್ ಸದಸ್ಯರು ಮಾಡುತ್ತಿದ್ದಾರೆ. ಆದರ್ಶಯುತ ಸಮಾಜ ನಿರ್ಮಾಣದ ಇವರ ಆಶಯ ನಿಜಕ್ಕೂ ಮಾದರಿಯಾಗಿದೆ ಎಂದರು.
ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಪಠ್ಯಪುಸ್ತಕ, ನೋಟ್‍ಬುಕ್, ಶಾಲಾ ಸಾಮಗ್ರಿ ವಿತರಣೆ ಮಾಡುತ್ತಿರುವುದು ಉತ್ತಮ ಕಾರ್ಯ. ಜತೆಗೆ ಉಚಿತ ವೈದ್ಯಕೀಯ ಶಿಬಿರಗಳು, ರಕ್ತದಾನ ಶಿಬಿರಗಳು, ಕಣ್ಣು ತಪಾಸಣಾ ಶಿಬಿರಗಳನ್ನು ಆಯೋಜಿಸುವ ಮೂಲಕ ಬಯಲುಸೀಮೆ ಜನರಿಗೆ ಆರೋಗ್ಯ ಸೇವೆ ನೀಡುತ್ತಿದೆ ಎಂದು ತಿಳಿಸಿದರು.
ಪರಿಸರ ಸಂರಕ್ಷಣೆ ಮೂಲಕ ಗಿಡ ನೆಡುವುದು, ಪ್ಲಾಸ್ಟಿಕ್ ಮುಕ್ತ ಅಭಿಯಾನ, ಸಾಮಾಜಿಕ ಜಾಗೃತಿ, ಮದ್ಯಪಾನ ನಿಷೇಧ, ಧೂಮಪಾನ ವಿರುದ್ಧ ಜಾಗೃತಿ ನಡೆಸುತ್ತಿದೆ. ಅಷ್ಟೇ ಅಲ್ಲದೆ ಕಲೆ, ಕ್ರೀಡೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಯುವಕರ ಪ್ರತಿಭೆಗೆ ವೇದಿಕೆ ಒದಗಿಸುತ್ತಿರುವುದು ಅತ್ಯುತ್ತಮ ಕಾರ್ಯವಾಗಿದೆ. ಈ ಎಲ್ಲ ಸೇವಾ ಕಾರ್ಯಗಳ ಮೂಲಕ ಸೇವೆಯೇ ಧರ್ಮ ಎಂಬ ಮಂತ್ರವನ್ನು ಪಠಿಸುತ್ತಿದೆ ಎಂದರು.
ನೀನಾಸಂ ಕಲಾವಿದ ಕೆ.ಪಿ.ಎಂ.ಗಣೇಶಯ್ಯ ರಂಗಗೀತೆಗಳನ್ನು ಹಾಡಿದರು. ಕ್ಲಬ್‍ನ ಜಡ್‍ಸಿ ಎ.ಆರ್.ಲಕ್ಷ್ಮಣ, ಆರ್.ಸಿ.ಕೋಟೇಶ್ವರ ಗುಪ್ತ, ಖಜಾಂಚಿ ದೊಂತಿ ಸತ್ಯನಾರಾಯಣ ಗುಪ್ತ, ಉಪಾಧ್ಯಕ್ಷ ಎಂ.ಸಿ.ಸಂತೋಷ್, ನಿರ್ದೇಶಕರಾದ ಟಿ.ಎಸ್.ಸುಹಾಸ್, ಶೈಲಜಾ ಸತ್ಯನಾರಾಯಣ, ಸೌಮ್ಯ ಪ್ರವೀಣ್, ಪ್ರವೀಣ್, ಜ್ಯೋತಿ ಲಕ್ಷ್ಮಣ, ರೇಖಾ ಸಂತೋಷ್, ಶ್ರೀನಿವಾಸ ಇದ್ದರು.



0 Comments
If u have any queries, Please let us know