ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ : ಸೆ. 10 ರಿಂದ ವಿದ್ಯಾರ್ಥಿಗಳಿಂದ ಮನೆ ಮನೆ ಭೇಟಿ : ಡಿ.ಸಿ. ವೆಂಕಟೇಶ್

 

ಚಿತ್ರದುರ್ಗ ಸೆ. 06 : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ವತಿಯಿಂದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಇದೇ ಸೆ. 22 ರಿಂದ ಆರಂಭವಾಗಲಿದ್ದು, ಇದಕ್ಕೆ ಪೂರ್ವಭಾವಿಯಾಗಿ, ಸರ್ಕಾರದ ನಿರ್ದೇಶನದಂತೆ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಮನೆ ಮನೆಗೆ ಭೇಟಿ ನೀಡಿ, ಸಮೀಕ್ಷೆಗೆ ಅಗತ್ಯವಿರುವ ದಾಖಲೆಗಳನ್ನು ಸಾರ್ವಜನಿಕರು ಸಿದ್ಧಪಡಿಸಿ ಇಟ್ಟುಕೊಳ್ಳಲು ಅರಿವು ಮೂಡಿಸುವ ಕಾರ್ಯ ಇದೇ  ಸೆ. 10 ರಿಂದ 19 ರವರೆಗೆ ಕೈಗೊಳ್ಳಲಿದ್ದಾರೆ ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ತಿಳಿಸಿದ್ದಾರೆ.
ಹಿಂದುಳಿದ ವರ್ಗಗಳ ಆಯೋಗ ವತಿಯಿಂದ ಕೈಗೊಳ್ಳಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಸಂಬAಧ ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರ ಅಧ್ಯಕ್ಷತೆಯಲ್ಲಿ ಜರುಗಿದ ವಿಡಿಯೋ ಸಂವಾದದ ಬಳಿಕ ಜಿಲ್ಲಾಧಿಕಾರಿಗಳು ಈ ಕುರಿತಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ತಿಳಿಸಿದರು.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕುರಿತಂತೆ ಸೂಚನೆ ನೀಡಿದ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಎನ್ನುವುದು ರಾಜ್ಯದ ಎಲ್ಲಾ  ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ತಿಳಿದುಕೊಂಡು ರಾಜ್ಯದ  ನೀತಿ ನಿರೂಪಣೆಯನ್ನು ಕೈಗೊಳ್ಳಲು ಆಧಾರವಾಗಿರುತ್ತದೆ. ಸಮೀಕ್ಷೆ ಕಾರ್ಯವೂ ಈ ನಾಡಿನ ಸೇವೆಯ ಭಾಗವಾಗಿದೆ.  ಸಮೀಕ್ಷಾ ಕಾರ್ಯವೂ  ಅನುಷ್ಟಾನವಾಗುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿಯಿಂದ.   ಶಿಕ್ಷಕರಿಂದ ಮನೆ ಮನೆ ಸಮೀಕ್ಷೆ ಇದೇ ತಿಂಗಳು ಅಂದರೆ ಸೆಪ್ಟೆಂಬರ್ 22ನೇ ತಾರೀಖಿನಿಂದ ಪ್ರಾರಂಭವಾಗಿ ಅಕ್ಟೋಬರ್ 7  ರವರೆಗೆ ನಡೆಯಲಿದೆ.

ರಾಜ್ಯದ ಸುಮಾರು 2 ಕೋಟಿ ಮನೆಗಳ ಸಮೀಕ್ಷೆ ಕೈಗೊಳ್ಳಬೇಕಿರುತ್ತದೆ.  ಸಮೀಕ್ಷೆ ನಡೆಯುವ ಸಂದರ್ಭದಲ್ಲಿ ಗಣತಿದಾರರಿಗೆ ಮಾಹಿತಿ ನೀಡಲು ಏನೇನು ಮಾಹಿತಿ ಹಾಗೂ ದಾಖಲೆಗಳನ್ನು ಸಾರ್ವಜನಿಕರು ಸಿದ್ಧ ಮಾಡಿಟ್ಟುಕೊಳ್ಳಬೇಕು ಎಂಬುದರ ಬಗ್ಗೆ ವಿದ್ಯಾರ್ಥಿಗಳ ಮೂಲಕ, ಎನ್‌ಎಸ್‌ಎಸ್ ಸ್ವಯಂ ಸೇವಕ ವಿದ್ಯಾರ್ಥಿಗಳ ಮೂಲಕ ಕುಟುಂಬಗಳಿಗೆ ಸಾಕಷ್ಟು ಮುಂಚಿತವಾಗಿ ಅರಿವು ಮೂಡಿಸಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ.  ಜಿಲ್ಲೆಯ ಎಲ್ಲ ಕಾಲೇಜುಗಳಲ್ಲಿನ ಎನ್‌ಎಸ್‌ಎಸ್ ಘಟಕಗಳಲ್ಲಿನ ವಿದ್ಯಾರ್ಥಿಗಳು ಹಾಗೂ ಇತರೆ ವಿದ್ಯಾರ್ಥಿಗಳು ಕೂಡ ಸ್ವಯಂ ಪ್ರೇರಿತವಾಗಿ ಜನರಲ್ಲಿ ಅರಿವು ಮೂಡಿಸುವ ಕಾರ್ಯದಲ್ಲಿ ಭಾಗಿಯಾಗಬಹುದಾಗಿದೆ.  ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಸಮನ್ವಯ ಮಾಡಬೇಕು ಎಂದು ಸಚಿವರು ಸೂಚನೆ ನೀಡಿದರು.
ಸಚಿವರ ವಿಡಿಯೋ ಸಂವಾದದ ಬಳಿಕ, ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅವರು, ಜಿಲ್ಲೆಯಲ್ಲಿ ಪ್ರತಿಯೊಂದು ಕುಟುಂಬದ ಸಮೀಕ್ಷೆ ನಡೆಸಬೇಕು. ಅಲೆಮಾರಿ, ಅರೆ ಅಲೆಮಾರಿ, ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಿರುವ ಕುಟುಂಬಗಳನ್ನೂ ಸಹ ಸಮೀಕ್ಷೆ ವ್ಯಾಪ್ತಿಗೆ ತರಬೇಕು.  ಯಾವೊಂದು ಕುಟುಂಬವೂ ಕೂಡ ಸಮೀಕ್ಷೆಯಿಂದ ಹೊರಗುಳಿಯಬಾರದು ಎಂದರು.  ಸಮೀಕ್ಷೆಯಲ್ಲಿ ಸುಮಾರು 60 ಪ್ರಶ್ನಾವಳಿಗಳಿದ್ದು, ಸಮೀಕ್ಷೆ ಕಾರ್ಯವನ್ನು ಪಡಿತರ ಚೀಟಿ ಮತ್ತು ಆಧಾರ್ ಸಂಖ್ಯೆಯ ಆಧಾರದ ಮೇಲೆ ಸಮೀಕ್ಷಾದಾರರು ಸಮೀಕ್ಷೆ ಮಾಡುವುದರಿಂದ, ಸಮೀಕ್ಷಾದಾರರು ಮನೆಗೆ ಭೇಟಿ ನೀಡಿದಾಗ ಪಡಿತರ ಚೀಟಿ,  ಆಧಾರ್ ಕಾರ್ಡ್ ಅಥವಾ ಆಧಾರ್ ಕಾರ್ಡ್ ಸಂಖ್ಯೆ, ವಿಕಲಚೇತನರಾಗಿದ್ದರೆ UID ಕಾರ್ಡ್ ಅಥವಾ ಅಂಗವಿಕಲ ಪ್ರಮಾಣಪತ್ರ, ಮತದಾರರ ಗುರುತಿನ ಚೀಟಿ ಸಿದ್ದ ಮಾಡಿ ಇಟ್ಟುಕೊಂಡಿರಬೇಕು.  ಇದರಿಂದ ಸಮೀಕ್ಷೆ ಕಾರ್ಯ ಸುಲಭ ಮತ್ತು ವೇಗವಾಗಿ ನಡೆಸಬಹುದಾಗಿದೆ. ಕುಟುಂಬದ ಎಲ್ಲಾ ಸದಸ್ಯರಗಳ ಆಧಾರ್ ಕಾರ್ಡ್ ಗಳು ಯಾವ ಮೊಬೈಲ್ ನಂಬರ್ ಗಳಿಗೆ ಲಿಂಕ್ ಆಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.  ಸಮೀಕ್ಷೆಗೆ ಆಧಾರ್ ಕಾರ್ಡ್ ಕಡ್ಡಾಯವಾಗಿರುವುದರಿಂದ ಆಧಾರ್ ಕಾರ್ಡ್ ಇಲ್ಲದಿದ್ದಲ್ಲಿ  ಕೂಡಲೆ ಹತ್ತಿರದ ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಿ,  ನೋಂದಣಿ ಮಾಡಿಸಿ ನೋಂದಣಿ ಸಂಖ್ಯೆಯನ್ನು  ಪಡೆಯಬೇಕಿರುತ್ತದೆ.  ಆಧಾರ್ ಕಾರ್ಡ್ ಇದ್ದು ಲಿಂಕ್ ಆಗಿರುವ ಮೊಬೈಲ್ ಪೋನ್ ನಂಬರ್ ಇಲ್ಲದಿದ್ದರೆ  ಹತ್ತಿರದ ಆಧಾರ್ ನೊಂದಣಿ ಕೇಂದ್ರಕ್ಕೆ ಭೇಟಿ ನೀಡಿ, ಪ್ರಸ್ತುತ ಬಳಸುತ್ತಿರುವ ಮೊಬೈಲ್ ನಂಬರ್ ಗೆ ಲಿಂಕ್ ಮಾಡಿಸಿಕೊಳ್ಳಬೇಕು.  ಈ ರೀತಿ ಸಾರ್ವಜನಿಕರಿಗೆ ಸಮೀಕ್ಷೆ ಸಂದರ್ಭದಲ್ಲಿ ಅಗತ್ಯವಿರುವ ದಾಖಲೆಗಳು, ಮಾಹಿತಿ ಕುರಿತಂತೆ ಅರಿವು ಮೂಡಿಸುವ ಕಾರ್ಯವನ್ನು ಸೆ. 10 ರಿಂದ 19 ರವರೆಗೆ ಜಿಲ್ಲೆಯಲ್ಲಿ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಮನೆ ಮನೆ ಭೇಟಿ ನೀಡಿ, ತಿಳುವಳಿಕೆ ನೀಡಲಿದ್ದಾರೆ.

ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ : ಜಿಲ್ಲೆಯಲ್ಲಿರುವ ಎಲ್ಲ ಸರ್ಕಾರಿ ಮತ್ತು ಖಾಸಗಿಗೆ ಸಂಬAಧಿಸಿದ ಒಟ್ಟು ಕಾಲೇಜುಗಳು, ಎನ್‌ಎಸ್‌ಎಸ್ ಘಟಕಗಳು, ಲಭ್ಯವಿರುವ ಎನ್‌ಎಸ್‌ಎಸ್ ವಿದ್ಯಾರ್ಥಿಗಳ ಸಂಖ್ಯೆಯ ವಿವರವನ್ನು ಸಂಗ್ರಹಿಸಿಟ್ಟುಕೊAಡು, ಆ ವಿದ್ಯಾರ್ಥಿಗಳು ಜನರಲ್ಲಿ ಜಾಗೃತಿ ಮೂಡಿಸಬೇಕಾದ ಅಂಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ಪೂರ್ವಭಾವಿಯಾಗಿ ತರಬೇತಿ ಕೂಡ ನೀಡಲಾಗುವುದು.  ವಿದ್ಯಾರ್ಥಿನಿಯರಿಗೆ ನಗರ, ಪಟ್ಟಣ ಕೇಂದ್ರಗಳಲ್ಲಿ ಮನೆ ಮನೆ ಭೇಟಿ ಕಾರ್ಯಕ್ಕೆ ನಿಯೋಜಿಸಬೇಕು,  ಪ್ರತಿ ಬ್ಲಾಕ್ ಗಳಲ್ಲೂ ವಿದ್ಯಾರ್ಥಿಗಳಿಂದ ಮನೆ ಮನೆ ಭೇಟಿ ಹಾಗೂ ಅರಿವು ಮೂಡಿಸುವ ಕಾರ್ಯ ಅಚ್ಚುಕಟ್ಟಾಗಿ ಆಗಬೇಕು.  ಹಾಗೂ ಈ ಕಾರ್ಯದ ಸಮಗ್ರ ದಾಖಲೀಕರಣ ಕೂಡ ಆಗಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.  ಸಮೀಕ್ಷೆ ಕುರಿತಂತೆ ಜನಜಾಗೃತಿ ಮೂಡಿಸಲು ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ಈ ಕುರಿತಂತೆ ಪ್ರಮಾಣ ಪತ್ರವನ್ನು ಕೂಡ ವಿತರಿಸಲು ಸರ್ಕಾರ ನಿರ್ಧರಿಸಿದೆ.   ವಿದ್ಯಾರ್ಥಿಗಳಿಗೆ ಆಯಾ ಗ್ರಾಮ ಪಂಚಾಯತಿಗಳ ಪಿಡಿಒ ಗಳು, ನಗರ, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಉತ್ತಮ ರೀತಿಯಲ್ಲಿ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅವರು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎಸ್. ಆಕಾಶ್, ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪುಷ್ಪಲತಾ, ಡಿಡಿಪಿಐ ಮಂಜುನಾಥ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

{}

Post a Comment

0 Comments